Saturday, March 20, 2010

ಮಳೆಯಲ್ಲಿ ಬಿಸಿಲೆಯಲಿ
ಮಳೆಯಲಿ ಬಿಸಿಲೆಯಲಿ........ನನ್ನ ಮೈಸೂರು ಮಲ್ಲಿಗೆ ಬ್ಲಾಗಿನಲ್ಲಿ “ಮಾಸಿದ ಹಾದಿಯಲ್ಲಿ ಮೂಡಿದ ಹೆಜ್ಜೆಗಳು ”ಬರಹದಲ್ಲಿ ಬೆಟ್ಟಸಾಲುಗಳ ಹಿಂದಿನಲ್ಲಿ ಪುಷ್ಪಗಿರಿ ಗಾಂಭೀರ್ಯದಿಂದ ನಿಂತಿತ್ತು ಎಂದು ಬರೆದು ನನ್ನ ಬರಹ ಇನ್ನೊಂದು ಪೋಸ್ಟಿನಲ್ಲಿ ಮುಂದುವರೆಸುವುದಾಗಿ ಹೇಳಿದ್ದೇನೆ.ಅದನ್ನು ಓದಿ ಇಲ್ಲಿಗೆ ಬಂದರೆ ನನ್ನ ಈ ಕಥೆ ನಿಮಗೆ ಸಲೀಸಾಗಿ ಅರ್ಥವಾಗುತ್ತದೆ.ಪುಷ್ಪಗಿರಿ ಎಂದು ಹೇಳಿದೆನಲ್ಲಾ ಅದು ನಿಮಗೆಲ್ಲರಿಗೂ ಗೊತ್ತಿರಬಹುದು.ಕೊಡಗಿಗೆ ಸೇರಿದ ಈ ಪರ್ವತ ಹಾಸನ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಬೆಟ್ಟಗಳನ್ನು ತನ್ನ ಇಕ್ಕೆಲದಲ್ಲೂ ನಿಲ್ಲಿಸಿಕೊಂಡು ನಿಂತಿದೆ.ಈ ಪರ್ವತ ಪಂಕ್ತಿಗಳ ಅಡಿಯಲ್ಲಿ ಆಳ ಕಣಿವೆಯಲ್ಲಿ ವಿಶಾಲವಾಗಿ ಹರಡಿ ನಂತರ ಇವಕ್ಕೆ ಎದಿರಾಗಿ ಬೆಳೆದ ಬೆಟ್ಟಸಾಲುಗಳು ಬಿಸಿಲೆ ರಕ್ಷಿತಾರಣ್ಯವೆನಿಸಿವೆ.ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಎಸಳೂರು ವಲಯಕ್ಕೆ ಸೇರಿದ ಬಿಸಿಲೆ ಘಾಟಿ ಬಲುಘಾಟಿ.ನಿಬಿಡ ಅರಣ್ಯದ ಈ ತಾಣಕ್ಕೆ ಬೇಸಿಗೆಯ ದಿನಗಳಲ್ಲೆ ಕಾಲಿಟ್ಟರೆ ಏನೋ ಒಂಥರಾ ಭಯ.ಅಂತದರಲ್ಲಿ ನಾನು ಮತ್ತು ಕಿರಣ ಮಳೆಯಲ್ಲಿ ಬಿಸಿಲೆಯಲಿ ಅಡ್ಡಾಡಿ ಬರುವ ಸಾಹಸ ಮಾಡೀದೆವು!

ಹೀಗಿದೆ ಕೇಳಿ ನಮ್ಮ ಅನುಭವ......


ಗಣಪತಿ ಹಬ್ಬಕ್ಕೆಂದು ಊರಿಗೆ ಹೋದಾಗ ಮಳೆ ಬೇಜಾರಿಲ್ಲದೆ ಒಂದೇ ಸಮನೆ ಸುರಿಯುತ್ತಿತ್ತು.ಸ್ವಲ್ಪ ದಿನ ಬಿಡುವು ಕೊಟ್ಟು ನಿಸರ್ಗಕ್ಕೆ ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ವರ್ಷಧಾರೆ ಮತ್ತೋಮ್ಮೆ ಮುಸಲಧಾರೆಯಾಗಿ ಸುರಿಯುತ್ತಿದ್ದರಿಂದಲೋ ಏನೋ ನಿಸರ್ಗದಲ್ಲಿ ವಿಶೇಷ ಸೊಬಗಿತ್ತು. ಹಬ್ಬಕ್ಕೆ ಊರಿಗೆ ಬಂದಿದ್ದ ಗೆಳೆಯ ಕಿರಣನೊಡನೆ ಮಳೆಯ ಹಿಮ್ಮೇಳದಲ್ಲಿ ಹರಟುತ್ತಾ ಕುಳಿತಿದ್ದೆ. ದೂರದಲ್ಲಿ ದಟ್ಟ ಮಂಜಿನಲ್ಲಿ ಪುಷ್ಪಗಿರಿ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಏಶಿಯಾದಲ್ಲೇ ವಿಶಿಷ್ಟ ಮಳೆಕಾಡೆನಿಸಿದ ಬಿಸಿಲೇ ಘಾಟಿ ಪುಷ್ಪಗಿರಿ ಬೆಟ್ಟಸಾಲಿಗೆ ಹೊಂದಿಕೊಂಡಿದೆ.ಈ ಮಳೆಯಲ್ಲಿ ಬಿಸಿಲೆ ಘಾಟಿ ಹೇಗಿರಬಹುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ ಮಳೆಯಲ್ಲಿ ಬಿಸಿಲೆ ಕಾಡಿನ ಚಾರಣದ ಯೋಜನೆ ಸಿದ್ದವಾಯಿತು.ಬಿಸಿಲೆ ಘಾಟಿ ನಮ್ಮೂರು ಉಚ್ಚಂಗಿಯಿಂದ ೨೦ ಕಿಮೀ ದೂರದಲ್ಲಿದೆ.ಮಳೆಯಲ್ಲಿ ಮುಳುಗಿದ ಬಿಸಿಲೆ ಘಾಟಿಗೆ ಹೋಗುತ್ತೇವೆಂದರೆ ‘ನಿಮಗೆ ತಲೆಕೆಟ್ಟಿದೆ’ ಎಂದು ಎಲ್ಲರೂ ಬೈದು ಬುದ್ದಿ ಹೇಳುತ್ತಾರೆಂದು ನಮಗೆ ಗೊತ್ತಿತ್ತು.ಇಲ್ಲೇ ಕೂಡುರಸ್ತೆಗೆ ಹೋಗಿಬರುತ್ತೇವೆಂದು ಹೇಳಿ ನಾನು ಮತ್ತು ಗೆಳೆಯ ಕಿರಣ ‘ಬೆಟ್ಟದ ಜಗ್ಗ’ನ ಡಕೋಟ ಬೈಕನ್ನೇರಿ ಕೂಡುರಸ್ತೆ ತಲುಪಿದೆವು.ಈ ಬೆಟ್ಟದ ಜಗ್ಗನ ಪೂರ್ವಿಕರು ಮಂಗಳೂರಿನ ಕಡೆಯವರು.ಪೂಜಾರಿಗಳು.ಇಲ್ಲಿನ ಕಾಫಿ ಏಲಕ್ಕಿ ತೋಟ ಪರಿಚಿತರ ಮನೆಯ ಸಮೀಪ ಬೈಕು ನಿಲ್ಲಿಸಿ ಬಿಸಿಲೆಯ ಕಾಡಿನ ಹಾದಿ ತುಳಿದೆವು.ಮಘೆ ಮಳೆ ಮನಸೋ ಇಚ್ಛೆ ಕುಣಿಯುತ್ತಿತ್ತು."ಬಂದರೆ ಮಘೆ ಹೋದರೆ ಹೊಗೆ" ಎಂಬ ಗಾದೆ ಅಕ್ಷರಶಃ ಸತ್ಯವಾಗಿತ್ತು.ಮಳೆ ನಿಂತರೆ ಸಾಕು ದಟ್ಟ ಮಂಜಿನ ಹೊಗೆ ಐದಡಿ ಮುಂದಿನ ರಸ್ತೆ ಕಾಣದಂತೆ ಆವರಿಸಿಕೊಳ್ಳುತ್ತಿತ್ತು. ಆಗಸದೆತ್ತರ ಬೆಳೆದ ಬೆಟ್ಟಸಾಲುಗಳನ್ನು ಹಂತಹಂತವಾಗಿ ನುಂಗುತ್ತಾ ಕ್ಷಣಕ್ಕೊಂದು ದೃಶ್ಯವನ್ನು ನೀಡುತ್ತಿದ್ದ ಹೊಗೆ ಹೋದರೆ ಸಾಕು ಮಳೆಯ ತಕಧಿಮಿತಾ ಶುರು.ಬಿಸಿಲೆ ಊರು ಒದ್ದೆಮುದ್ದೆಯಾಗಿತ್ತು.ಹಸಿರನ್ನೇ ಉಸಿರಾಗಿಸಿಕೊಂಡ ಬೆಟ್ಟಸಾಲುಗಳ ಅಡಿಯಲ್ಲಿನ ಗದ್ದೆಗಳಲ್ಲಿ ಆಗಷ್ಟೇ ನಾಟಿಯಾಗಿದ್ದರಿಂದ ಹಸಿರು ಎಲ್ಲೆಲ್ಲೂ ಹಸಿರು ಹರಡಿತ್ತು.ಹಾವು ಹರಿದಂತೆ ಮಲಗಿದ ಬಿಸಿಲೆ ರಸ್ತೆಯ ಇಕ್ಕೆಲದಲ್ಲೂ ದಟ್ಟಕಾಡು,ಮಂಜಿನ ಮುಸುಕು ಮಧ್ಯಾಹ್ನದ ವೇಳೆಗೇ ಕತ್ತಲನ್ನು ಬರಮಾಡಿಕೊಂದಿತ್ತು.ಎತ್ತರಕ್ಕೆ ಬೆಳೆದ ಮರದ ಕಾಂಡಕ್ಕೊಂಡಿದ್ದ ಅಸಂಖ್ಯ ಸಿಕಾಡಗಳ ಟ್ರೂವ್ವಿ.....ಟ್ರುವ್ವಿ....ನಿರಂತರ ಗಾನ ಕಿವಿಯನ್ನು ಕೊರೆಯುತ್ತಿತ್ತು.ಇನ್ನು ರಸ್ತೆ ಬಿಟ್ಟು ಅಂಚಿಗೆ ಸಾಗಿದರೆ ಸಾಕು ನಮ್ಮ ರಕ್ತ ಸಂಬಂಧಿಗಳ(ಜಿಗಣೆ) ಸ್ವಾಗತ ಸಿಗುತ್ತಿತ್ತು.ಬಗೆಬಗೆಯ ಕಾಡುಹೂವುಗಳು,ಜರಿಗಿಡಗಳು,ಹಣ್ಣುಕಾಯಿಗಳು ಬಿಸಿಲೆ ಕಾಡಿನ ಅನುಪಮ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿದ್ದವು.ಇವೆಲ್ಲವನ್ನೂ ನೋಡುತ್ತಾ ಬಿಸಿಲೆಯ ಪ್ರಕೃತಿ ವೀಕ್ಷಣಾ ಗೋಪುರವನ್ನೇರಿದ್ದೆವು.ನಮ್ಮ ಜರ್ಕಿನ್ನುಗಳು ಮಳೆಯ ರೌದ್ರತೆಗೆ ಹೆದರಿ ಸೋತುಸುಣ್ಣವಾಗಿದ್ದವು.ಮಳೆಯ ನೀರು ಮೆಲ್ಲನೆ ಒಳಗೂ ಇಳಿದು ನಾವು ತೊಯ್ದುತೊಪ್ಪೆಯಾಗುವಂತೆ ಮಾಡಿತ್ತು.ತೀಡುವ ತಣ್ಣನೆಯ ಗಾಳಿಗೆ ಮೈ ಗಡಗಡ ನಡುಗುತ್ತಿತ್ತು.ಒಬ್ಬರ ಮುಖ ಒಬ್ಬರು ನೋಡಿಕೊಂಡೆವು."ಇದು ನಮಗೆ ಬೇಕಿತ್ತಾ..." ಎಂಬ ಭಾವನೆ ಇಬ್ಬರಲ್ಲೂ ಮೂಡಿತ್ತು.ಆದರೆ...ಈ ದಿನಗಳಲ್ಲಿ ಮಳೆಯನ್ನೇ ಆಭರಣವಾಗಿಸಿಕೊಂಡು ಅನನ್ಯ ಚಲುವಿನಿಂದ ಕಂಗೊಳಿಸುವ ಬಿಸಿಲೆಯಂತಹ ಮಹಾ ಮಳೆಕಾಡನ್ನು ಸುತ್ತುತ್ತಿರುವುದು ಅವಿಸ್ಮರಣೀಯ ಅನುಭವ ಎಂಬ ಸತ್ಯವೂ ನಮಗೆ ವೇದ್ಯವಾಗಿತ್ತು.ಎತ್ತರದ ದಿಬ್ಬದ ಮೇಲೆ ಕಟ್ಟಿದ ಈ ವೀಕ್ಷಣಾ ಗೋಪುರದ ಮೇಲೆ ಶೀತಗಾಳಿ ನಿರಂತರವಾಗಿ ಬೀಸುತ್ತಿತ್ತು.ಆಳ ಕಣಿವೆಯಲ್ಲಿ ಗಿರಿಹೋಳೆ ಧೋ....ಧುಢುಂ..ಧುಢುಂ....ಎಂದು ಧುಮ್ಮಿಕ್ಕಿ ಹರಿಯುತ್ತಿತ್ತು.ಈ ವೀಕ್ಷಣಾ ಗೋಪುರದಿಂದ ಕಾಣುವ ೫ ಪರ್ವತ ಪಂಕ್ತಿಗಳು ಕಾಣುತ್ತಲೇ ಇಲ್ಲವಲ್ಲ ಎಂಬ ಸಂಗತಿ ಆಗಷ್ಟೇ ನಮ್ಮ ಅರಿವಿಗೆ ಬಂತು.ದಟ್ಟನೆಯ ಧೂಮ ಈ ಬೆಟ್ಟಸಾಲುಗಳನ್ನು ಅಪೋಶನ ತೆಗೆದು ಕೊಂಡಿತ್ತು.ಈ ತಾಣಕ್ಕೆ ಎದಿರಾಗಿ ೫ ಗಗನ ಚುಂಬಿ ಬೆಟ್ಟಗಳು ನಿಂತಿವೆ ಎಂಬ ಕಿಂಚಿತ್ ಕುರುಹು ಇಲ್ಲದಂತೆ ಕಂದು ಬಣ್ಣದ ಹೊಗೆ ಭೂಮ್ಯಾಕಾಶವನ್ನು ಒಂದು ಮಾಡಿತ್ತು.ಈ ಗೋಪುರದ ಮೇಲೆ ನಿಂತು ಎಡಬಿಡದೇ ಸುರಿಯುತ್ತಿದ್ದ ಮಳೆಯ ಹಾಡನ್ನು ಕೇಳುತ್ತಾ ಅದೆಷ್ಟು ಹೊತ್ತು ನಿಂತಿದ್ದೆವೋ ನಮಗೇ ತಿಳಿಯದು.
ಜಲಪಾತದ ಜಾಡು ಹಿಡಿದು
ಹಾಡುಹಗಲೇ ಕತ್ತಲು ಕವಿದಂತಿದ್ದ ಇಳಿಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವಾಗ ಕಾಡಂಚಿನಲ್ಲಿ ಜಲಧಾರೆಯೊಂದು ಸೊಗಸಾಗಿ ಕಂಡಿತು.ಜಾರುವ ಬಂಡೆಗಳನ್ನು ಬಿಗಿದಪ್ಪಿ ಮೇಲೇರುತ್ತಾ ಜಲಧಾರೆಯ ಮೂಲ ಹುಡುಕ ತೊಡಗಿದೆವು.ಅಂಕುಡೊಂಕಾಗಿ ಬಂಡೆಗಳ ಸಂದಿಯಲ್ಲಿ ಇಳಿಯುತ್ತಾ ಬರುತ್ತಿರುವ ಈ ಜಲಕನ್ನಿಕೆ ತನ್ನ ಮೂಲವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡದೆ ಸತಾಯಿಸ ತೊಡಗಿದಳು.ನಾವು ಛಲಬಿಡದೇ ಬಂಡೆಗಳನ್ನೇರುತ್ತಾ,ಕೊರಕಲಿನಲ್ಲಿ ಜೋಲಿ ಹೊಡೆಯುತ್ತಾ ಸಾಗಿದಾಗ ಕಾಡಗರ್ಭದಲ್ಲಿ ಬಂಧಿಯಾದದ್ದು ಅರಿವಾಯಿತು.ಸೋಲೊಪ್ಪಿಕೊಂಡು ವಯ್ಯಾರದಿಂದ ಜಾರುವ ಝರಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಾ ಮತ್ತೆ ರಸ್ತೆಗೆ ಬಂದು ನಿಸರ್ಗದ ನಿತ್ಯ ನೂತನ ಚೆಲುವನ್ನು ಆಸ್ವಾದಿಸುತ್ತಾ,ಕಣ್ಣು-ಕ್ಯಾಮೆರಾಗಳಲ್ಲಿ ತುಂಬಿಕೊಳ್ಳುತ್ತಾ ಮನೆ ಹಾದಿ ಹಿಡಿದಾಗ ಬಿಸಿಲೆ ಕಾಡು ಕತ್ತಲನ್ನು ಬಿಗಿದಪ್ಪಿ ಮಲಗಿತ್ತು.
ಸುಧಾಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿರುವ ಈ ಲೇಖನವನ್ನು ಮತ್ತಷ್ಟು ಚಿತ್ರಗಳೊಂದಿಗೆ ಸುಧಾ ಯುಗಾದಿ ವಿಶೇಷಾಂಕ ೨೦೧೦ ನೋಡಿ.ಸಮೃದ್ದ ಮಾಹಿತಿಯ ಸುಧಾ ಯುಗಾದಿ ವಿಶೇಷ ಆರ್ಷಕವಾಗಿದೆ.

1 comment:

Unknown said...

What an experience...

Kindly post some more pics as i missed this years Ugaadi Visheshanka.

Also we belong to a place called Karekoppa (which is still an imaginary place for me and existed only in my initials) which is next to Uchangi.

As we are settled in Bangalore i am yet to explore uchangi & Karekoppa.

I will be really grateful if you can throw some light about Karekoppa as well.

Regards,

Jagadish Karekoppa